ಸಿಎಂ ಬೊಮ್ಮಾಯಿರಿಂದ ಪಶುಸಂಗೋಪನೆ ಯೋಜನೆಗಳಿಗೆ ಅನುದಾನದ ಭರವಸೆ: ಸಚಿವ ಪ್ರಭು ಚವ್ಹಾಣ್
1 min readಬೆಂಗಳೂರು,ಜ.21-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಶುಸಂಗೋಪನೆ ಇಲಾಖೆಯ ಪ್ರಮುಖ ಯೋಜನೆಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಶುಸಂಗೋಪನೆ ಇಲಾಖೆಯಲ್ಲಿ ಅನುದಾನದ ಕೊರತೆ ನೀಗಿಸಿ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ನಡೆಸಿದ ಚರ್ಚೆ ಫಲಪ್ರದವಾಗಿದೆ ಎಂದರು.
ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕೆಲ ಜಿಲ್ಲೆಗಳಲ್ಲಿ 10 ರಿಂದ 15 ಎಕರೆ ಮಾತ್ರ ಲಭ್ಯವಾಗುತ್ತಿದೆ. ಸದ್ಯ ಪಶುಸಂಗೋಪನೆ ಇಲಾಖೆಯ ಯೋಜನೆ ಅನ್ವಯ ಈ ಸ್ಥಳ ಗೋಶಾಲೆ ನಿರ್ಮಾಣ, ಗೋಉತ್ಪನ್ನಗಳ ತಯಾರಿಕೆಗೆ ಸಾಕಾಗದಿರುವುದರಿಂದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗೆ 100 ಎಕರೆ ನಿಗದಿ ಮಾಡಲು ಕಂದಾಯ ಇಲಾಖೆಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಕೂಡಲೇ ಜಮೀನು ಮಂಜೂರು ಮಾಡಲು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದರು.
ರಾಜ್ಯದಲ್ಲಿ ಸುಮಾರು 188 ಗೋ ಶಾಲೆಗಳಿದ್ದು, ಅವುಗಳಿಗೆ ಸಹಾಯಾನುದಾನದ ಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ 4 ಕೋಟಿ ರೂ. ಅನುದಾನ ನೀಡಲಾಗಿದೆ. ಸದ್ಯ ಈ ಗೋಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿದ್ದು, ಅವುಗಳ ಪಾಲನೆ ಪೋಷಣೆಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, 20 ಕೋಟಿ ರೂ. ನೀಡಲು ಸಚಿವರು ಮನವಿ ಮಾಡಿದ್ದಾರೆ.