ರಾಜ್ಯ ಸರ್ಕಾರದ ಸೂಚನೆ: 19 ಕೆರೆಗಳಲ್ಲೂ ಅಮೃತ ಮಹೋತ್ಸವ ಆಚರಣೆ

1 min read

ಮೈಸೂರು: ರಾಜ್ಯದ ಜಿಲ್ಲಾ ಪಂಚಾಯಿತಿಗಳಿಗೆ ಸರ್ಕಾರ ನೀಡಿದ್ದ ಗುರಿ ಅನ್ವಯ ಮೈಸೂರು ಜಿಲ್ಲಾ ಪಂಚಾಯಿತಿಯಿಂದ ವಿಶೇಷವಾಗಿ 19 ಕೆರೆಗಳ ಸ್ಥಳದಲ್ಲಿಯೂ ಅಮೃತ ಮಹೋತ್ಸವ ದ ಅಂಗವಾಗಿ ರಾಷ್ಟ್ರ ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಿದೆ.

ಭಾರತ ದೇಶದೆಲ್ಲೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಕೇಂದ್ರ ಸರ್ಕಾರ ‘ಅಮೃತ ಸರೋವರ’ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲೂ ಸಾಂಪ್ರದಾಯಿಕ ಜಲಮೂಲಗಳನ್ನು ಪುನಶ್ವೇತನಗೊಳಿಸಲು ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ 75 ಕೆರೆಗಳ ಸಂರಕ್ಷಣೆ ಗೆ ಗುರಿ ನೀಡಿತ್ತು. ಸ್ವಾತಂತ್ರ್ಯ ದಿನಾಚರಣೆಗೆ 15 ಕೆರೆಗಳನ್ನು ಪುನರುಜೀವನಗೊಳಿಸಲೇ ಬೇಕೆಂಬ ನಿರ್ದೇಶನ ನೀಡಿತ್ತು.

ಈ ಬಗ್ಗೆ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ.ಬಿ.ಆರ್.ಪೂರ್ಣಿಮಾ ಅವರು ವಿಶೇಷ ಕಾಳಜಿ ವಹಿಸಿ ವಾರ್ಷಿಕ 59 ಕೆರೆಗಳ ಅಭಿವೃದ್ಧಿಗೆ ಗುರಿ ನೀಡಿದ್ದರು. ಇದಕ್ಕಾಗಿ ಏಪ್ರಿಲ್‌ನಿಂದಲೇ ಕಾಮಗಾರಿ ನಡೆಸಿ ಮಳೆಯ ಅಡ್ಡಿ ನಡುವೆಯೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆಗಳನ್ನು ಪುನರುಜ್ಜಿವನಗೊಳಿಸಿ, ಅಂತರ್ಜಲ ಅಭಿವೃದ್ಧಿ ಮಾಡುವುದು, ಗ್ರಾಮೀಣ ಜಲ ಭದ್ರತೆಗೆ ಧಕ್ಕೆಯಾಗದಂತೆ ಗಮನಹರಿಸಿ ಭವಿಷ್ಯದಲ್ಲಿ ನೀರಿನ ಬವಣೆ ಪರಿಹರಿಸುವುದು ಎಚ್ಚರ ವಹಿಸುವುದೇ ‘ಅಮೃತ ಸರೋವರ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ- 5, ಹುಣಸೂರು-11, ಕೆ.ಆರ್.ನಗರ -8, ಮೈಸೂರು-14, ನಂಜನಗೂಡು-10, ಪಿರಿಯಾಪಟ್ಟಣ-10, ಸರಗೂರು-2, ನರಸೀಪುರ-19 ಒಟ್ಟು 79 ಕೆರೆಗಳ ಅಭಿವೃದ್ಧಿ ಗೆ ಗುರಿ ನಿಗದಿ ಪಡಿಸಿಕೊಂಡಿದೆ. ಇದಿಷ್ಟು ಡಿಸೆಂಬರ್ ವೇಳೆಗೆ ಅಂತ್ಯಗೊಳ್ಳಲಿವೆ.
ಅಂತೆಯೇ ಆ.15 ರೊಳಗೆ 15 ಕೆರೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದೆ. ಅದರಂತೆ ಎಚ್.ಡಿ.ಕೋಟೆಯಲ್ಲಿ -2, ಹುಣಸೂರು-4, ಕೆ.ಆರ್.ನಗರ-2, ಮೈಸೂರು-3, ನಂಜನಗೂಡು- 2, ಪಿರಿಯಾಪಟ್ಟಣ-3, ಸರಗೂರು-1,ತಿ ನರಸೀಪುರ ದಲ್ಲಿ 2 ಸೇರಿ 19 ಕೆರೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಅಷ್ಟು ಕೆರೆಗಳಲ್ಲಿ ಆ.15 ರಂದು ರಾಷ್ಟ್ರ ಧ್ವಜ ಹಾರಿಸಿ ಅರ್ಥಪೂರ್ಣವಾಗಿ ಅಮೃತ ಮಹೋತ್ಸವ ಆಚರಣೆಯಲ್ಲಿ ಇಲಾಖೆ ಭಾಗವಹಿಸಲಿದೆ.

ಕೆರೆಗಳ ಏರಿ ಬಲವರ್ಧನೆ, ಹೂಳೆತ್ತಿ ನೀರಿನ ಶೇಖರಣಾ ಸಾಮರ್ಥ್ಯ ವೃದ್ಧಿಸುವುದು, ಪೂರಕ ನಾಲೆಗಳ ಅಭಿವೃದ್ಧಿ, ಕೆರೆ ಸುತ್ತಲೂ ನೆಡುತೋಪುಗಳ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆ ಇತ್ಯಾದಿ ಚಟುವಟಿಕೆ ಕೈಗೊಂಡಿವೆ. ಅಶೋಕ, ಅರಳಿ ಸೇರಿ ಮೂರು ಬಗೆಯ ಸಸಿಗಳನ್ನು ನೆಟ್ಟು ಕೆರೆ ಸುತ್ತ ಅರಣೀಕರಣ ಮಾಡಿ ಪರಿಸರ ಸಮತೋಲನ ಕಾಪಾಡುವುದು, ಒತ್ತುವರಿ ತಡೆಯುವುದು ಹಾಗೂ ಬರುವ ದಿನಗಳಲ್ಲಿ ಕೆರೆಗಳ ಸ್ವಚ್ಛತಾ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಈ ಕುರಿತು ವಿವರಣೆ ನೀಡಿರುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಯವರಾದ ಎಂ.ಕೃಷ್ಣರಾಜು ಅವರು, ಸರ್ಕಾರದ ಸೂಚನೆ ಮೇರೆಗೆ ಅಮೃತ ಸರೋವರ ಯೋಜನೆಯಡಿ 79 ಕೆರೆಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ತಯಾರಿ ನಡೆಸಿದೆ. ಇನ್ನೂ ಆ.15 ರೊಳಗೆ ನಿಗಧಿತ ಗುರಿಯನ್ನು ಮೀರಿ 19 ಕೆರೆಗಳ ಪುನಶ್ಚೇತನ ಪೂರ್ಣಗೊಂಡು ಅಲ್ಲಿ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *