ಮೈಸೂರು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಎಸ್.ಟಿ.ಸೋಮಶೇಖರ್
1 min readಮೈಸೂರು: ಚಾಮರಾಜನಗರದಲ್ಲಿ ನಡೆದಂತಹ ಪ್ರಕರಣ ಮೈಸೂರುನಲ್ಲಿ ಆಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಮೈಸೂರು ಮಹಾನಗರಪಾಲಿಕೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಗುರುವಾರ ನಡೆದ ಕೋವಿಡ್ ಮುಂಜಾಗೃತ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆಕ್ಸಿಜನ್ ದುರಂತ ಮೈಸೂರು ಜಿಲ್ಲೆಯ ಮರುಕಳಿಸಬಾರದೆಂಬ ಹಿನ್ನೆಲೆಯಲ್ಲಿ ಆಕ್ಸಿಜನ್ ವಿಚಾರದಲ್ಲಿ ಮೈಸೂರು ಜಿಲ್ಲೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊವಿಡ್ ಪರೀಕ್ಷೆ ಮಾಡುವುದನ್ನು ನಿಲ್ಲಿಸಿಲ್ಲ. ಕೊವಿಡ್ ವರದಿ ಬರಲು 3 ರಿಂದ 4 ದಿನಗಳು ಬೇಕಾಗುತ್ತದೆ. ಇದರಿಂದ ಕೊವಿಡ್ ಪ್ರಕರಣಗಳು ಹೆಚ್ಚಾಗಬಹುದು. ಹೀಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸೊಂಕಿನ ಲಕ್ಷಣಗಳು ಇರುವವರಿಗೆ ಪ್ರಥಮ ಆದ್ಯತೆ ನೀಡಿ ಪರೀಕ್ಷಿಸಲಾಗುತ್ತಿದೆ ಎಂದರು.
ಆದಷ್ಟು ಶೀಘ್ರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಹಾಕುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಅಭಾವ ಇಲ್ಲ. ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಔಷಧ ಮಾರಾಟವಾಗುತ್ತಿದ್ದು, ಇದನ್ನು ತಡೆಗಟ್ಟಲು ಪೊಲೀಸರು ಕ್ರಮಕೈಗೊಂಡಿದ್ದಾರೆ. ಇದೊಂದು ದಂಧೆಯಾಗಿದೆ. ದಂಧೆಯಲ್ಲಿ ತೊಡಗಿರುವವರನ್ನು ಯಾವುದೇ ರೀತಿಯಲ್ಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಖಾಸಗಿ ಆಸ್ಪತ್ರೆಯವರು ಶೇ.50 ರಷ್ಟು ಬೆಡ್ ಗಳನ್ನು ನೀಡಬೇಕು. ಈ ಸಂಬಂಧ ಜೆ.ಎಸ್.ಎಸ್. ಆಸ್ಪತ್ರೆಯವರೊಂದಿಗೆ ಮಾತನಾಡಿದ್ದು, 100 ಆಕ್ಸಿಜನ್ ಬೆಡ್ಗಳನ್ನು ಕೊಡಬೇಕು ಎಂದು ಕೇಳಲಾಗಿದೆ ಎಂದರು.
ಶಾಸಕರಾದ ಎಸ್.ಎ.ರಾಮದಾಸ್ ಅವರು ಸೋಂಕಿಗೆ ಒಳಗಾದ ನಂತರದ ಅನುಭವಗಳನ್ನು ಹಂಚಿಕೊಂಡರು. ಪಾಸಿಟಿವ್ ಬಂದಿರುವ ಹಲವರು ಸ್ವೇಚ್ಛೆಯಾಗಿ ಓಡಾಡುತ್ತಿದ್ದಾರೆ. ಇದರಿಂದ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಪಾಸಿಟಿವ್ ಬಂದವರ ಮನೆಗೆ ಬಿಳಿ ಬಾವುಟ ಹಾಕಲು ಉದ್ದೇಶಿಸಲಾಗಿದೆ. ಆಗ ನೆರೆಹೊರೆಯವರು ಎಚ್ಚರಿಕೆಯಿಂದ ಇರುತ್ತಾರೆ ಎಂದು ಹೇಳಿದರು.
ಪಾಲಿಕೆಯ ಮಹಾಪೌರರಾದ ರುಕ್ಮಿಣಿ ಮಾದೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರ ಪಾಲಿಕೆ ಆಯುಕ್ತರಾದ ಶಿಲ್ಪನಾಗ್ ಸೇರಿದಂತೆ ಇತರರು ಹಾಜರಿದ್ದರು.