ಸರ್ಕಾರದಿಂದ ತ್ರಿವಿಧ ದಾಸೋಹ ಕಾಯಕ ರೂಪದಲ್ಲಿ: ಸಿಎಂ ಬಸವರಾಜ ಬೊಮ್ಮಾಯಿ
1 min readಬೆಂಗಳೂರು,ಜ.21- ಸಿದ್ದಗಂಗಾ ಮಠ ದಾಸೋಹದ ಬಹಳ ದೊಡ್ಡ ಪರಂಪರೆಯನ್ನೇ ಕರ್ನಾಟಕದಲ್ಲಿ ಹುಟ್ಟುಹಾಕಿದೆ. ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಅನ್ನ, ಆಶ್ರಯ ಹಾಗೂ ಅಕ್ಷರವೆಂಬ ತ್ರಿವಿಧ ದಾಸೋಹವನ್ನು ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ತುಮಕೂರಿನ ಸಿದ್ದಗಂಗಾಮಠದಲ್ಲಿ ‘ ದಾಸೋಹ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸಿದವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು. ದಾಸೋಹ ದಿನವನ್ನು ಸಿದ್ದಗಂಗಾ ಮಠದಲ್ಲಿ ಆಚರಣೆ ಮಾಡಬೇಕೆಂದು ಸರ್ಕಾರ ತೀರ್ಮಾನಿಸಿದೆ ಎಂದರು.
ನಮ್ಮ ಸರ್ಕಾರವು ತ್ರಿವಿಧ ದಾಸೋಹವನ್ನು ಕಾಯಕ ರೂಪದಲ್ಲಿ ಮಾಡುತ್ತಾ ಅದೇ ದಾರಿಯಲ್ಲಿ ನಡೆಯುತ್ತಿದೆ. ನಾಲ್ಕು ಕೆಜಿ ನೀಡಲಾಗುತ್ತಿದ್ದ ಅಕ್ಕಿಯನ್ನು ಐದು ಕೆಜಿಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ಧತಿಗೆ ಅನುಗುಣವಾಗಿ ರಾಗಿ, ಜೋಳ ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ವಿದ್ಯಾ ದಾಸೋಹವನ್ನೂ ಸರ್ಕಾರ ಕೈಗೊಂಡಿದ್ದು, ಕಾರ್ಮಿಕರ ಹಾಗೂ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅಲ್ಲದೆ, ಸರ್ಕಾರ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು ಕಟ್ಟಿಸಿಕೊಡುತ್ತಿದ್ದು, ಐದು ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.