ದಶದಿಕ್ಕುಗಳಲ್ಲೂ ಮಾರ್ದನಿಸಿದ ಕನ್ನಡ ಗೀತ ಗಾಯನದ ಉದ್ಘೋಷ.

1 min read

ಇವತ್ತು ಇಡೀ ನಮ್ಮ ಕರ್ನಾಟಕದ ರಾಜ್ಯದಲ್ಲಿ ಅದೊಂದು ವಾಕ್ಯ ಮಾರ್ಧನಿಸಿತ್ತು. ಎಲ್ಲಿ ಕೇಳಿದರು ಕನ್ನಡ ಕನ್ನಡ ಕನ್ನಡವೇ ಆಗಿತ್ತು. ಅದರಲ್ಲು ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಕನ್ನಡದ ಇತಿಹಾಸಕ್ಕೆ ಸಾಕ್ಷಿಯಾಯಿತು.

ಹೌದು ಇವತ್ತು ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

ಬೆಳಿಗ್ಗೆ ಸರಿಯಾಗಿ ಹನ್ನೊಂದು ಗಂಟೆಗೆ ವಿಧಾನ ಸಭೆಯ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ವಿ ಸುನಿಲ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗಿತ್ತು ಬೃಹತ್ ಪರದೆಯ ಮುಂದೆ ನಿಂತು ಕನ್ನಡ ಗೀತ ಗಾಯನದ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳನ್ನು ಒಳಗೊಂಡಂತೆ ಎಲ್ಲಾ ಹಿರಿಯ ಭಾರತೀಯ ಆಡಳಿತ ಸೇವೆಯ ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ಸಹಕರಿಸಿದರು.

ಇದೇ ರೀತಿ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಭಾರಿ ಉತ್ಸಾಹ, ಸಡಗರ ಸಂಭ್ರಮದಿಂದ ನಡೆಯಿತು.

ಒಂದು ಅಂದಾಜಿನ ಪ್ರಕಾರ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 18 ಲಕ್ಷ ಎಂದು ವರದಿಗಳು ತಿಳಿಸಿವೆ.

ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಈ ಗೀತಗಾಯನ ಅಭೂತಪೂರ್ವ ಜನಸ್ಪಂದನ ಯೊಂದಿಗೆ ಆಯೋಜನೆಗೊಂಡಿತ್ತು.

ನೂರಾರು ಗಾಯಕರು ಕಲಾವಿದರು ಸಾಹಿತಿಗಳು ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಿಶ್ವವಿಖ್ಯಾತ ಗೋಲ್ ಗುಂಬಜ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮಂಡ್ಯದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು. ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 161232 ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

ಮೈಸೂರು ವಿಭಾಗದಲ್ಲಿ 96 ಸ್ಥಳಗಳಲ್ಲಿ 541365 ಜನ ಈ ಗೀತ ಗಾಯನದಲ್ಲಿ ಪಾಲ್ಗೊಂಡರು.

ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 1074418 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಲಬುರ್ಗಿ ವಿಭಾಗದ 60 ಸ್ಥಳಗಳಲ್ಲಿ 77125 ಜನ ಈ ಗೀತ ಗಾಯನ ದ ಮಾಧುರ್ಯಕ್ಕೆ ಜೊತೆಯಾದರು.

ದೆಹಲಿ ಮುಂಬಯಿ ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು.

ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು ಎಂದರೆ ತಪ್ಪಾಗಲಾರದು.

ನನ್ನೂರು ಮೈಸೂರು ಟೀಂ…

About Author

Leave a Reply

Your email address will not be published. Required fields are marked *