ಮೈಸೂರಿನಲ್ಲಿ ನವಜಾತ ಮಕ್ಕಳ ಮಾರಾಟ ಜಾಲ ಪತ್ತೆ!
1 min readಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪ್ರಕರಣ ಸಂಬಂಧ ಒಂದು ಮಗು ಮಾರಾಟದ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮತ್ತೊಂದು ಮಗುವಿನ ಮಾರಾಟದ ಸುಳಿವು ಸಿಕ್ಕಿದೆ ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಇತ್ತೀಚೆಗೆ ಮಗುವೊಂದು ಮಾರಾಟವಾಗಿತ್ತು.
ಗಂಡ ಸತ್ತ ಬಡ ಮಹಿಳೆಯೊಬ್ಬಳು ತಮ್ಮ ಮೂರು ತಿಂಗಳ ಮಗುವನ್ನು ಬೇರೊಬ್ಬಳಿಗೆ ನೀಡಿದ್ದಳು. ಈ ಪ್ರಕರಣದ ಬೆನ್ನಲ್ಲೇ ನಂಜನಗೂಡಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಶ್ರೀಮತಿ ಅಲಿಯಾಸ್ ಸರಸ್ವತಿ ನಾಡಿಗ ಎಂಬಾಕೆಯೇ ಈ ಜಾಲದ ಕಿಂಗ್ಪಿನ್ ಆಗಿದ್ದು, ಶ್ರೀಮತಿಯ ಪುತ್ರಿ ಲಕ್ಷ್ಮಿ ಕೂಡ ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಭಿಕ್ಷುಕರು, ನಿರ್ಗತಿಕರು, ವಿಧವೆಯರು, ಬೀದಿಬದಿಯ ನಿವಾಸಿಗಳೇ ಇವರ ಟಾರ್ಗೆಟ್ ಆಗಿದ್ದು, ನಾನು ಅನಾಥಾಶ್ರಮ ನಡೆಸುತ್ತಿದ್ದೇನೆ, ನಿಮ್ಮ ಮಗುವನ್ನು ಚೆನ್ನಾಗಿ ಸಾಕುತ್ತೇನೆ ಎಂದೆಲ್ಲ ನಂಬಿಸಿ ಮಕ್ಕಳನ್ನು ಪಡೆದುಕೊಳ್ತಿದ್ದರು.
- ಹೀಗೆ ಪಡೆದ ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡ್ತಿದ್ರು. ಜ್ಯೋತಿ ಎಂಬ ಮಹಿಳೆ ಇತ್ತೀಚೆಗೆ ಮೂರು ತಿಂಗಳ ಮಗುವನ್ನು ಶ್ರೀಮತಿಗೆ ನೀಡಿದ್ದಳು.
ಆರಂಭದಲ್ಲಿ ಈ ಪ್ರಕರಣದಲ್ಲಿ ಆರ್ಥಿಕ ವಹಿವಾಟು ನಡೆದಿಲ್ಲ ಎನ್ನಲಾಗಿತ್ತು. ಆದ್ರೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ, ದಲ್ಲಾಳಿ ಶ್ರೀಮತಿ ಮಗು ಮಾರಾಟ ಮಾಡಿ 3 ಲಕ್ಷ ರೂಪಾಯಿವರೆಗೂ ಹಣ ಪಡೆದುಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ. ಈಕೆಯ ಮೂಲಕವೇ ಮತ್ತಷ್ಟು ಮಕ್ಕಳ ಮಾರಾಟವಾಗಿರುವ ಬಗ್ಗೆಯೂ ಶಂಕೆ ಮೂಡಿತ್ತು. ಮಕ್ಕಳ ಮಾರಾಟ ಜಾಲ ಭೇದಿಸಲು ತೀವ್ರವಾದ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಇದೀಗ ಮತ್ತೊಂದು ಮಗು ಮಾರಾಟದ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೂ ಈ ಮೊದಲು ಜ್ಯೋತಿ ಎಂಬಾಕೆಯಿಂದ ಮಗುವನ್ನು ಪಡೆದು ಹೊಳೆನರಸೀಪುರ ಮೂಲದ ದಂಪತಿಗೆ ಮಾರಾಟ ಮಾಡಲಾಗಿತ್ತು.
ಎರಡನೇ ಮಗುವನ್ನು ಮಂಜುಳ ಎಂಬಾಕೆಯಿಂದ ಪಡೆದು ಕೊಳ್ಳೇಗಾಲ ಪಟ್ಟಣದ ದಂಪತಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದೀಗ ಆರೋಪಿಗಳಾದ ಶ್ರೀಮತಿ ಹಾಗೂ ಲಕ್ಷ್ಮಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಾನೂನಿಗೆ ವಿರುದ್ಧವಾಗಿ ಮಕ್ಕಳನ್ನು ಮಾರಾಟ ಮಾಡಿರುವವರು, ಮಧ್ಯವರ್ತಿಗಳು ಹಾಗೂ ಮಕ್ಕಳನ್ನು ಕೊಂಡುಕೊಂಡಿರುವವರು ತಪ್ಪಿತಸ್ಥರಾಗಿದ್ದಾರೆ. ಹಾಗಾಗಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದಾಗಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ