ಸಾತಗಳ್ಳಿ ಹಂಚ್ಯಾ ವಲಯದಲ್ಲಿ ಹಸರೀಕರಣಕ್ಕೆ ಸಚಿವದ್ವಯರಿಂದ ಚಾಲನೆ
1 min readಮೈಸೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಶನಿವಾರ ಸಾತಗಳ್ಳಿ , ವಸಂತನಗರ, ಮುಂತಾದ ಬಡಾವಣೆಗಳಲ್ಲಿ ಒಂದು ಬಾರಿಯ ಕ್ರಮವಾಗಿ (one time measures) ಪ್ರಸ್ತಾಪಿತವಾಗಿರುವ ಕಾಮಗಾರಿಗಳ ಪರಿವೀಕ್ಷಣೆ ಮಾಡಿ ಹಂಚ್ಯಾ ಸಾತಗಳ್ಳಿ ‘ಎ’ ವಲಯ ಬಡಾವಣೆಯ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಹಸಿರು ಮೈಸೂರಿಕರಣಕ್ಕೆ ಚಾಲನೆ ನೀಡಿದರು.
ಬಳಿಕ ವಸಂತನಗರ ಹಾಗೂ ಲಲಿತಾದ್ರಿಪುರ ವ್ಯಾಪ್ತಿಯ ಓಟಿಎಂ ಪ್ರಸ್ತಾಪಿತ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಸಾರ್ವಜನಿಕರು ಸಚಿವರಿಗೆ ತಮ್ಮ ಕಾಲೋನಿಯ ಸಮಸ್ಯೆಗಳಾದ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಮಾತನಾಡಿ, ನೀರಿನ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿಯೇ ಹಳೆ ಉಂಡವಾಡಿಯಲ್ಲಿ 350ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 90 ಎಂ.ಎಲ್.ಡಿ ನೀರನ್ನು ಕಬಿನಿಯಿಂದ ತೆಗೆದುಕೊಳ್ಳಲಾಗುವ ಪ್ರಕ್ರಿಯೆಗೆ ಸಿದ್ದತೆ ನಡೆಯುತ್ತಿದೆ ಎಂದರು.
ಬೀದಿಬದಿಯಲ್ಲಿರುವ ದೀಪವನ್ನು ಅಳವಡಿಸಲು ಟೆಂಡರ್ ಶೀಘ್ರವಾಗಿ ಕರೆಯಲಾಗುತ್ತಿದ್ದು, ಬೀದಿ ದೀಪ ಸಮಸ್ಯೆಯು ಶೀಘ್ರವಾಗಿ ನಿವಾರಿಸಲಾಗುವುದು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಫಣೀಶ್, ಜೆ.ಎಲ್.ಆರ್ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್, ಟಿ.ಪಿ.ಎಂ. ಜಯಸಿಂಹ, ವಲಯಾಧಿಕಾರಿ ಎಸ್.ಕೆ. ಭಾಸ್ಕರ್ ಸೇರಿದಂತೆ ಇತರರು ಹಾಜರಿದ್ದರು.