ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳ ಮೇಲೆ ವಾಕ್ಸಿನ್ ಪ್ರಯೋಗ ಯಶಸ್ವಿ!
1 min readಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ಪ್ರತಿಷ್ಠಿತ ಮಕ್ಕಳ ಚೆಲುವಾಂಬ ಆಸ್ಪತ್ರೆಯಲ್ಲಿ, ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ.
ದೇಶದ 10 ಆಸ್ಪತ್ರೆಗಳಲ್ಲಿ ಈ ಸ್ವದೇಶಿ ಉತ್ಪಾದನೆಯ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದ್ದು, ರಾಜ್ಯದ ಏಕೈಕ ಆಸ್ಪತ್ರೆ ಮೈಸೂರಿನ ಸರ್ಕಾರಿ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ 12 ರಿಂದ 18 ವರ್ಷದೊಳಗಿನ ಬರೋಬ್ಬರಿ 30 ಮಕ್ಕಳಿಗೆ ಲಸಿಕೆ ಪ್ರಯೋಗ ನಡೆದಿದೆ. ಕಳೆದ ಭಾನುವಾರದಿಂದ ಈ ಪ್ರಯೋಗ ನಡೆಯುತ್ತಿದ್ದು ಲಸಿಕೆಗೆ ಮುನ್ನ ಈ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಮಕ್ಕಳು ರಿಜಿಸ್ಟರ್ ಮಾಡಲಾಗಿತ್ತು.
ಇದರಲ್ಲಿ, ಒಟ್ಟು 30 ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಲಸಿಕೆಗೆ ಮುನ್ನ ಮಕ್ಕಳಿಗು ಕರೋನಾ ಟೆಸ್ಟ್ ಮಾಡಲಾಗಿದ್ದು, ಅದರ ವರದಿ ನೆಗಟಿವ್ ಬಂದ ನಂತರ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ ಮಕ್ಕಳಲ್ಲಿ 2 ಗಂಟೆ ಆಸ್ಪತ್ರೆಯಲ್ಲೇ ನಿಗಾವಹಿಸಿ ನಂತರ ಅವರನ್ನು ಮನೆಗೆ ಕಳುಹಿಸಿ ಕೊಡಲಾಗಿದೆ. ಪ್ರತಿ ದಿನವೂ ಲಸಿಕೆ ಪಡೆದ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗೆ ಕರೆ ಮಾಡಿ ಮಾಹಿತಿ ಪಡೆಯಲಾಗ್ತಿದೆ. ಲಸಿಕೆ ಪಡೆದ ಕೆಲ ಮಕ್ಕಳಿಗೆ ನೋವು, ಒಂದೆರಡು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಲಸಿಕೆ ಪ್ರಯೋಗ ಮಾಡಿದ ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಮುಂದಿನ ಹಂತದಲ್ಲಿ 6 ರಿಂದ 12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್, ಆ ನಂತರ 2 ರಿಂದ 6 ವರ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗವಿದ್ದು ಮಕ್ಕಳ ಮೇಲೆ 6 ರಿಂದ 7 ತಿಂಗಳು ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.