ಪಿರಿಯಾಪಟ್ಟಣ ತಾಲ್ಲೂಕಿನ ಕೆಲ ಗ್ರಾಪಂಗಳಿಗೆ ಜಿಪಂ ಸಿಇಒ ಎ.ಎಂ.ಯೋಗೀಶ್ ಅವರು ಭೇಟಿ, ಪರಿಶೀಲನೆ
1 min readಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೆಲ ಗ್ರಾಪಂಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಪಂ ಸಿಇಒ ಎ.ಎಂ.ಯೋಗೀಶ್ ಅವರು ಭೇಟಿ ನೀಡಿ ಕೋವಿಡ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಸಿಇಒ ಅವರು, ತಾಲ್ಲೂಕಿನ ಕಂಪಲಾಪುರ, ರಾಮನಾಥತುಂಗಾ, ಕಿರನಲ್ಲಿ, ಹಿಟ್ನೆಹೆಬ್ಬಾಗಿಲು, ಭುವನಹಳ್ಳಿ, ಕೋಮಲಪುರ ಗ್ರಾಪಂಗಳಿಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಅಂಕಿ ಅಂಶಗಳ ಕುರಿತು ಮಾಹಿತಿ ಪಡೆದರು.
ಕಂಪಲಾಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ಜತೆಗೆ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಆಲಿಸಿ, ಅದಕ್ಕೆ ಸೂಕ್ತ ಸಲಹೆ ನೀಡಿದರು.
ಕಿರನಲ್ಲಿ ಗ್ರಾಪಂನಲ್ಲಿ ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಂದ ಕೋವಿಡ್ ಕುರಿತ ಮಾಹಿತಿ ಪಡೆದರು. ಅಲ್ಲದೇ ಎಲ್ಲಾ ಗ್ರಾಮಗಳಿಗೆ ಸ್ಯಾನಿಟೈಸ್ ಮಾಡಿಸುವಂತೆ ಸೂಚಿಸಿದರು.
ರಾಮನಾಥತುಂಗಾ ಗ್ರಾಪಂಗೆ ಭೇಟಿ ನೀಡಿದ ವೇಳೆ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರು. ನರೇಗಾ ಕಾಮಗಾರಿಯ ಕುರಿತು ಮಾಹಿತಿ ಪಡೆದರು. ‘ವೈದ್ಯರ ನಡೆ-ಹಳ್ಳಿ ಕಡೆ’ ಕಾರ್ಯಕ್ರಮ ಆರಂಭಗೊಂಡಿದ್ದು, ಆ ಮೂಲಕ ವೈದ್ಯರು, ಆಶಾ ಕಾರ್ಯ ಕರ್ತೆಯರು, ಗ್ರಾಪಂ ಸದಸ್ಯರು, ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ, ಕೊರೊನಾ ಲಕ್ಷಣಗಳ್ಳುಳವರಿಗೆ ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ನಡೆಸಿ ಸೋಂಕಿಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಸೂಚಿಸಿದರು. ಜತೆಗೆ ಗ್ರಾಪಂನಲ್ಲಿರುವ ಕೋವಿಡ್ ವಾರ್ ರೂಂ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು.
ಹಿಟ್ನೆಹೆಬ್ಬಾಗಿಲು ಗ್ರಾಪಂನಲ್ಲಿ ಕೊರೊನಾ ಸಂಬಂಧಿಸಿದಂತೆ ಗ್ರಾಪಂ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ವಿವರ ಪಡೆದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕೊರೊನಾ ಅಂಕಿ ಅಂಶಗಳ ಮಾಹಿತಿ ಪಡೆದರು. ಬಳಿಕ ವಿಶೇಷಚೇತನರ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂದರ್ಭ ವಿಶೇಷಚೇತನರ ಕುರಿತು ಮಾತನಾಡಿದ ಅವರು, ಲಸಿಕೆಯನ್ನು ಪಡೆದುಕೊಳ್ಳಿ, ಲಸಿಕೆ ತೆಗೆದುಕೊಂಡ ನಂತರ ಏನಾದರೂ ಸಮಸ್ಯೆ ಕಂಡು ಬಂದಲ್ಲಿ. ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಇದೇ ವೇಳೆ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಭುವನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊರೊನಾ ಅಂಕಿಅಂಶಗಳ ಮಾಹಿತಿ ಪಡೆದುಕೊಂಡರು. ಕೋಮಲಾಪುರ ಗ್ರಾಪಂಗೆ ಭೇಟಿ ಅಲ್ಲಿನ ಕೊರೊನಾ ಸೋಂಕಿತರ ವಿವರ ಪಡೆದು, ಅವರಿಗೆ ಧೈರ್ಯ ತುಂಬಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ತಾಪಂ ಇಒ ಕೃಷ್ಣಕುಮಾರ್ ಸೇರಿದಂತೆ ಇತರರು ಹಾಜರಿದ್ದರು.