ಸೋಂಕಿತರ ಕುಂದು ಕೊರತೆ ಆಲಿಸಿದ ಸಿಇಒ
1 min readಮೈಸೂರು: ತಿ.ನರಸೀಪುರ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎಂ.ಯೋಗೀಶ್ ಭೇಟಿ ನೀಡಿ ಕೋವಿಡ್ ಸೋಂಕು ತಡೆಗಟ್ಟಲು ಗ್ರಾಪಂಗಳು ಕೈ ಗೊಂಡಿರುವ ಕ್ರಮಗಳನ್ನು ಅವಲೋಕಿಸಿದರು.
ಬನ್ನೂರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆಸ್ಪತ್ರೆಯ ಕುಂದು ಕೊರತೆಯನ್ನು ಆಲಿಸಿ, ಪರಿಸ್ಥಿತಿ ಅವಲೋಕಿಸಿದರು. ಮಲಿಯೂರು ಗ್ರಾಪಂಗೆ ಭೇಟಿ ನೀಡಿ, ಕೋವಿಡ್ ಸಂಬಂಧಿತ ಮಾಹಿತಿ ಪಡೆದರು. ಪಂಚಾಯಿತಿಯ ವ್ಯಾಪ್ತಿಯ ಗ್ರಾಮ ಸ್ಯಾನಿಟೈಸ್ ಮಾಡಲಾಗಿದಿಯೇ ಎಂದು ವಿಚಾರಿಸಿ, ಎಲ್ಲಾ ಗ್ರಾಮಗಳಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಲು ಸೂಚಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಸಾಂತ್ವನ ಹೇಳಿದರು.
ಕೋಡಗಹಳ್ಳಿ ಗ್ರಾಪಂ ಹಾಗೂ ಕೇತುಪುರ ಭೇಟಿ ನೀಡಿ ಕೋವಿಡ್ ಮತ್ತು ನರೇಗಾ ಯೋಜನೆಯ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅತ್ತಹಳ್ಳಿ ಗ್ರಾಪಂಗೆ ಆಶಾ ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿದರು. ಸೋಮನಾಥಪುರ ಗ್ರಾಪಂ ಹಾಗೂ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ರ್ಯಾಪಿಡ್ (rapid) ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹದೇವಯ್ಯ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಕೃಷ್ಣಪ್ಪಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಎಚ್ಒ ಡಾ.ಟಿ.ಅಮರನಾಥ್, ಮೈಲ್ಯಾಕ್ ಅಧ್ಯಕ್ಷ ಪಣೀಶ್, ಸೇರಿದಂತೆ ಇನ್ನಿತರರು ಇದ್ದರು.