September 8, 2024

2021ರ ಮೈಸೂರು ದಸರಾಗೆ ಖರ್ಚಾಗಿದ್ದು 5.42ಕೋಟಿ!

1 min read

ಮೈಸೂರು : 2021ರ ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ಖರ್ಚಾಗಿದ್ದು 57 ಲಕ್ಷ ರೂ.ಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಖರ್ಚುವೆಚ್ಚಗಳ ಮಾಹಿತಿ ಬಿಡುಗಡೆ ಮಾಡಿದರು.

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚುವೆಚ್ಚಗಳ ಸಂಪೂರ್ಣ ಮಾಹಿತಿಯನ್ನು ಅರಮನೆ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ ಮಾಡಿದರು.‍‌‌

ಮೈಸೂರು ದಸರಾಗೆ 4,22,07,679 ರೂ., ಖರ್ಚಾಗಿದೆ. ಶ್ರೀರಂಗಪಟ್ಟಣ, ಚಾಮರಾಜನಗರ ದಸರಾ ಆಚರಣೆಗೆ ತಲಾ 50 ಲಕ್ಷ ರೂ., ಅರಕಲಗೂಡು ದಸರಾಗೆ 20 ಲಕ್ಷ ರೂ. ಬಿಡುಗಡೆ ಮಾಡಿದ್ದು ಒಟ್ಡು 5,42,07,679 ರೂ. ಹಣ ಖರ್ಚಾಗಿದೆ ಎಂದು ವಿವರಿಸಿದರು.

ಮೈಸೂರು ದಸರಾ ಆಮಂತ್ರಣ ಪತ್ರಿಕೆ, ಮುದ್ರಣ ಇತ್ಯಾದಿಗಳಿಗೆ 5,91,960 ರೂ. ಖರ್ಚಾಗಿದ್ದರೆ, ಗಣ್ಯರು ಮತ್ತು ಕಲಾವಿದರ ಸಾರಿಗೆ ವ್ಯವಸ್ಥೆಗೆ 29,16,416 ರೂ. ಖರ್ಚಾಗಿದೆ. ಜಂಬೂಸವಾರಿ ಮೆರವಣಿಗೆಗೆ 37,50,772 ರೂ., ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕಲಾವಿದರ ಸಂಭಾವನೆಗೆ 1,03,64,272 ರೂ. ಖರ್ಚಾಗಿದೆ. ಸ್ತಬ್ಧ ಚಿತ್ರ ನಿರ್ಮಾಣಕ್ಕೆ 18,85,102 ರೂ., ಆನೆಗಳ‌ ನಿರ್ವಹಣೆಗೆ 50 ಲಕ್ಷ ರೂ., ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ವಿದ್ಯುತ್ ಕಾಮಗಾರಿಗಳ ವ್ಯವಸ್ಥೆಗಾಗಿ 93,80,000 ರೂ., ವೆಬ್ ಕ್ಯಾಸ್ಟಿಂಗ್ ಗೆ 11,09,200 ರೂ. ವೆಚ್ಚವಾಗಿದೆ. ಅರಮನೆಗೆ ಗೌರವ ಸಂಭಾವನೆಯಾಗಿ 40 ಲಕ್ಷ ರೂ., ದೂರದರ್ಶನದಲ್ಲಿ ಜಂಬೂಸವಾರಿ ನೇರಪ್ರಸಾರ ಮಾಡಿದ್ದಕ್ಕೆ 6,22,513 ರೂ., ದಸರಾ ಆನೆಗಳು ಹಾಗೂ ಕಾವಾಡಿಗರ ವಿಮೆಗೆ 24 ಸಾವಿರ ರೂ. ಭರಿಸಲಾಗಿದೆ.

ದಸರಾ ಸಂಬಂಧ ಉಪ ಸಮಿತಿ ಸಭೆಗೆ ಲೇಖನ ಸಾಮಾಗ್ರಿಗೆ 3245 ರೂ., ಉನ್ನತ ಮಟ್ಟದ ಸಮಿತಿ ಸಭೆ ಶಿಷ್ಟಾಚಾರಕ್ಕೆ ಹೋಟೆಲ್ ಮತ್ತು ಇತರೆ ವೆಚ್ಚಗಳಿಗೆ 47250 ರೂ., ದಸರಾ ಸಂಬಂಧ ನಡೆದ ವಿವಿಧ ಸಭೆಗಳಿಗೆ ಕಾಫಿ, ಟೀ, ಸ್ಮ್ಯಾಕ್ಸ್ ಗೆ 40,878 ರೂ., ಬಿಎಸ್ ಎನ್ ಎಲ್ ಗೆ 78,668 ರೂ., ಉನ್ನತ ಮಟ್ಟದ ಸಭೆಗೆ ಮತ್ತು ವಿಶೇಷಾಧಿಕಾರಿಗಳ ಕಚೇರಿಗೆ ಲೇಖನ ಸಾಮಾಗ್ರಿ ಖರೀದಿಗೆ 90,919 ರೂ., ಜಂಬೂ ಸವಾರಿ ನೇರ ವೀಕ್ಷಣೆ ವಿವರಣೆ ಬಿತ್ತರಿಸಲು ಆಕಾಶವಾಣಿಗೆ 67 ಸಾವಿರ ರೂ. ಪಾವತಿಸಲಾಗಿದೆ.

ದಸರಾ ಕಾರ್ಯಕ್ರಮಗಳ ಫೋಟೋ, ವೀಡಿಯೋಗ್ರಾಫಿಗೆ 95 ಸಾವಿರ ರೂ., ಸ್ವಚ್ಛತೆ ನಿರ್ವಹಣೆಗೆ 10, 76,072 ರೂ., ವಾರ್ತಾ ಇಲಾಖೆಗೆ 64,412 ರೂ., ದಸರಾ ರಂಗೋತ್ಸವ ಕಾರ್ಯಕ್ರಮಕ್ಕೆ ಅಂದಾಜು 10 ಲಕ್ಷ ರೂ. ವೆಚ್ಚವಾಗಿದೆ ಎಂದು ಸಚಿವರು ಮಾಹಿತಿ ಬಿಡುಗಡೆ ಮಾಡಿದರು.

ಮಳೆಹಾನಿ ಕುರಿತು ನೀಲನಕ್ಷೆ

ಮೈಸೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಆಗಿರುವ ಹಾನಿ, ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳ‌ ಗಮನಕ್ಕೆ ತರಲಾಗುವುದು. ಈ ಕುರಿತು ನೀಲನಕ್ಷೆ ತಯಾರಿಸಲಾಗಿದ್ದು ಅದನ್ನು ಸಿಎಂಗೆ ನೀಡಲಾಗುವುದು ಎಂದು ಹೇಳಿದರು.

ಹಾಲಿಗೆ ನೀರು ಬೆರೆಸಿದ ಪ್ರಕರಣ ತನಿಖೆ ಹೊಣೆಯನ್ನು ಸಿಒಡಿಗೆ ವಹಿಸಲಾಗಿದೆ. ಮೂರ್ನಾಲ್ಕು ದಿನದಲ್ಲಿ ಸಿಒಡಿ ವರದಿ ಸಲ್ಲಿಕೆಯಾಗಲಿದೆ. ಇದರ ಜೊತೆಗೆ ಸಹಕಾರಿ ಇಲಾಖೆ ಕೂಡ ವರದಿ ಸಿದ್ಧಪಡಿಸಿದ್ದು ಎರಡನ್ನು ಪರಾಮರ್ಶಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನಾಗೇಂದ್ರ, ಮೂಡಾ ಅಧ್ಯಕ್ಷ ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ ಪಿ ಆರ್.ಚೇತನ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಪಂ ಸಿಇಓ ಯೋಗೇಶ್ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *