ಮೈಸೂರಿನಲ್ಲಿ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಲೋಕಾರ್ಪಣೆ
1 min readಮೈಸೂರು: ಮೈಸೂರಿನ ಕೆ.ಆರ್.ಎಸ್ ರಸ್ತೆಯಲ್ಲಿರುವ ಪಿಕೆಟಿವಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿದ್ದ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯನ್ನು ಗುರುವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸೂಪರ್ ಸ್ಪೆಷಾಲಿಟಿಯಲ್ಲಿ ಈ 40 ಆಕ್ಸಿಜನೇಟೆಡ್ ಬೆಡ್ ಗಳ ವ್ಯವಸ್ಥೆ ಮಾಡಿ ಚಾಲನೆ ನೀಡಿದ್ದು, ಇನ್ನು 4 ರಿಂದ 5ದಿನಗಳಲ್ಲಿ ಬೆಡ್‌ಗಳನ್ನು ಹೆಚ್ಚು ಮಾಡಲಾಗುತ್ತದೆ ಎಂದರು.
ಇಂದು ಬೆಳಿಗ್ಗೆ ತುಳಸಿ ದಾಸಪ್ಪ ಆಸ್ಪತ್ರೆಯನ್ನೂ ಸಹ ಉದ್ಘಾಟಿಸಲಾಗಿದ್ದು , ಆ ಆಸ್ಪತ್ರೆಯನ್ನು ಸಹ 100 ಆಕ್ಸಿಜನೈಟೆಡ್ ಬೆಡ್ ಗಳನ್ನಾಗಿ ಮಾಡಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಎಲ್ಲಾರು ಆಕ್ಸಿಜನೈಟೆಡ್ ಬೆಡ್ ಗಳನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.
ಎನ್.ಆರ್.ಕ್ಷೇತ್ರದ ಬೀಡಿ ಕಾಲೋನಿಯ ಆಸ್ಪತ್ರೆಯನ್ನು ಬಳಸಿಕೊಂಡು ಆ ಆಸ್ಪತ್ರೆಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 100 ಆಕ್ಸಿಜನೈಟೆಡ್ ಬೆಡ್ ಗಳನ್ನು ಮಾಡಲು ಈಗಾಗಲೇ ಚಿಂತಿಸಲಾಗಿದೆ ಎಂದರು.
ಆಸ್ಪತ್ರೆಗೆ ಅವಶ್ಯಕತೆ ಇರುವ ವೈದ್ಯರನ್ನು ಹಾಗೂ ನಸ್೯ಗಳನ್ನು ಹಾಗೂ ಸ್ಪೆಷಲಿಸ್ಟ್ ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಕೋವಿಡ್ ರೋಗಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸಿದ್ದವಿದೆ ಎಂದು ಹೇಳಿದರು.
ಸೂಪರ್ ಸ್ಪೆಷಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಬೇಕಾಗಿತ್ತು. ಇದು ಶಾಸಕ ನಾಗೇಂದ್ರ ಅವರ ಕನಸಾಗಿತ್ತು. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಇದೆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಡಾ.ನಂಜರಾಜ ಸೇರಿದಂತೆ ಇತರರು ಹಾಜರಿದ್ದರು.