ಒಂದು ರೂ.ಗೆ ಪೆಟ್ರೋಲ್ ಹಾಕಿಸಿ ಕೇಂದ್ರ ಸರ್ಕಾರದ ವಿರುದ್ಧ ಅಣಕು ಪ್ರದರ್ಶನ
1 min readಮೈಸೂರು: ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಇಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಸುಮಾರು ನೂರು ಮಂದಿ ಸಾರ್ವಜನಿಕರಿಗೆ ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿ ಅಣುಕು ಪ್ರದರ್ಶನ ನಡೆಸಲಾಯಿತು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಜನ್ಮದಿನದಂದು ಯಾವುದೇ ರೀತಿಯ ಆಚರಣೆಯನ್ನು ಆಯೋಜಿಸಬಾರದು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಹಿನ್ನೆಲಯಲ್ಲಿ ಹಾಗೂ ಯಾವುದೇ ಹೋರ್ಡಿಂಗ್‌ಗಳು ಅಥವಾ ಪೋಸ್ಟರ್‌ಗಳನ್ನು ಹಾಕಬೇಡಿ, ಆದರೆ ಅಗತ್ಯವಿರುವ ಜನರಿಗೆ ಸಹಾಯ ಮಾಡಿ ಎಂದು ಹೇಳಿದ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ಆಯೋಜಿಸಿದೆ. ಇಂದು ಆರ್ ಟಿ ಒ ಕಛೇರಿ ಬಳಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಸಾರ್ವಜನಿಕರಿಗೆ ಒಂದು ರೂ.ನಲ್ಲಿ ಪೆಟ್ರೋಲ್ ಹಾಕಿಸಿ ಗುಲಾಬಿ ಹೂ. ನೀಡಲಾಯಿತು.
ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಮಾಜಿ ಎಐಸಿಸಿ ಅಧ್ಯಕ್ಷರಾದ ನಮ್ಮೆಲ್ಲರ ಮೆಚ್ಚಿನ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ನಗರದಲ್ಲಿ ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಎರಡನ್ನೂ ಒಳಗೊಂಡಂತೆ ಸರಿಸುಮಾರು ನೂರು ಜನರಿಗೆ ಒಂದು ರೂಪಾಯಿಗೆ ಪೆಟ್ರೋಲ್ ಹಾಕಿಸುವ ಕೆಲಸವನ್ನು ನಾವಿಲ್ಲಿ ಮಾಡಿದ್ದೇವೆ. ಯಾಕೆಂದರೆ ಇವತ್ತು ಇಡೀ ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ 112 ಡಾಲರ್ ಇದ್ದ ಕಚ್ಚಾ ತೈಲ ಬೆಲೆ 60ರಿಂದ 62ಡಾಲರ್ ಗೆ ಇಳಿದಿದ್ದರೂ ಕೇಂದ್ರ ಸರ್ಕಾರದವರು ಪೆಟ್ರೋಲ್ ಬೆಲೆಯನ್ನು ಇಳಿಸದೇ ಮೂರುವರೆ ಲಕ್ಷ ಕೋಟಿ ರೂ. ಆದಾಯ ಕಣ್ಣಲ್ಲಿಟ್ಟು ಬಡಬಗ್ಗರಿಗೆ ಕಣ್ಣೀರು ಹಾಕಿಸುತ್ತಿದ್ದಾರೆ. ಇದಕ್ಕೆ ನಾವು ಅಣುಕು ಪ್ರದರ್ಶನ ರೀತಿಯಲ್ಲಿ ರಾಹುಲ್ ಗಾಂಧಿಯವರ ಜನ್ಮದಿನವನ್ನು ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ ಗುಲಾಬಿ ಹೂ ನೀಡುವ ಮೂಲಕ ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್, ಫೈಲ್ವಾನ್ ಸುನೀಲ್, ಚೇತನ್, ರಾಜೇಶ್, ಪವನ್ ,ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೂರ್ತಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.